ವಿಜಯಕರ್ನಾಟಕ
	ಕನ್ನಡ ಪತ್ರಿಕೋದ್ಯಮವು ನಿಂತ ನೀರಾಗಿದ್ದ ಹಳೇ ಸಂಪ್ರದಾಯಗಳ ಚೌಕಟ್ಟಿನೊಳಗೆ ಬಂಧಿಯಾಗಿದ್ದ ಅದರಿಂದ ಹೊರಬರಲಾಗದೆ ತಿಣುಕಾಡುತ್ತಿದ್ದ ಸಂದರ್ಭದಲ್ಲಿ ಹೊರಹೊಮ್ಮಿದ್ದು ವಿಜಯ ಕರ್ನಾಟಕ ದಿನಪತ್ರಿಕೆ. 

	ರಾಜ್ಯಮಟ್ಟದ ಆರು ದೈನಿಕಗಳ ನಡುವೆ 1999ರ ಅಕ್ಟೋಬರ್‍ನಲ್ಲಿ ದಾಪುಗಾಲು ಹಾಕುತ್ತಾ ಮುನ್ನಡೆದ ವಿಜಯ ಕರ್ನಾಟಕ ಅಲ್ಪ ಕಾಲದಲ್ಲೇ ಜನಮನದಲ್ಲಿ ಅಚ್ಚೊತ್ತಿ ನಿಂತಿತು. ರಾಜ್ಯದ ಎಂಟು ಪ್ರಮುಖ ಜಿಲ್ಲೆಗಳಲ್ಲಿ ಸ್ಥಳೀಯ ಆವೃತ್ತಿಯೊಂದಿಗೆ ಪ್ರಕಟವಾದ ಪತ್ರಿಕೆ ಏಕಕಾಲದಲ್ಲಿ ಕೋಳಿ ಕೂಗುವ ಮೊದಲೇ ಓದುಗರ ಕೈ ಸೇರುವಂತಾಯಿತು. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಸಿಕ್ಕಿ ಜನಪ್ರಿಯವಾಯಿತು. ಕೈಗೆಟುಕುವ ದರ, ಸುದ್ದಿ ಸಮೃದ್ಧಿ, ಉತ್ಕøಷ್ಟ ಗುಣಮಟ್ಟ, ವಿಭಿನ್ನತೆ, ಸಮಗ್ರತೆ, ನಿಷ್ಪಕ್ಷಪಾತ, ದಿಟ್ಟತನದಿಂದಾಗಿ ಕನ್ನಡ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಒಂದು ಸ್ಥಾನಗಳಿಸಿತು. ವಿಜಯ ಕರ್ನಾಟಕ ಆರಂಭದಿಂದಲೂ ಹೊಸ ಪ್ರಯೋಗಗಳನ್ನು ಮಾಡುತ್ತಾ ಹೋಯಿತು. ವಿಜಯ ಕರ್ನಾಟಕ ಆರಂಭವಾಗುವವರೆಗೆ ಕನ್ನಡ ಪತ್ರಿಕೆಗಳು ಭಾನುವಾರದ ಸಾಪ್ತಾಹಿಕ ಹಾಗೂ ಶುಕ್ರವಾರದ ಸಿನಿಮಾ ಪುರವಣಿಗೆ ಮಾತ್ರ ಸೀಮಿತವಾಗಿದ್ದವು. ಇಂಥ ಸಂದರ್ಭದಲ್ಲಿ ಮೊದಲ ಪ್ರಧಾನ ಸಂಪಾದಕ ಈಶ್ವರ ದೈತೋಟ ಹಲವು ಪುರವಣಿಗಳನ್ನು ಪರಿಚಯಿಸಿದರು. ಮಕ್ಕಳಿಗಾಗಿ ಪುಟಾಣಿ ವಿಜಯ, ಮಹಿಳೆಯರಿಗಾಗಿ ಮಹಿಳಾ ವಿಜಯ, ರೈತರಿಗೆ ಕೃಷಿ ವಿಜಯ, ಸಂಸ್ಕøತಿ, ಪರಂಪರೆ ಪ್ರತಿಬಿಂಬಿಸುವ ಧರ್ಮ ವಿಜಯ - ಹೀಗೆ ನಾನಾ ಪುರವಣಿಗಳು ಪ್ರಕಟವಾದುವು. ಆರಂಭದಲ್ಲಿ ಕಡಿಮೆ ಜಾಹಿರಾತು ವಿಸ್ತøತ ಸುದ್ದಿ ಬರಹಗಳಿಗೆ ಹೆಚ್ಚಿನ ಸ್ಥಳಾವಕಾಶ ಸಿಗುವಂತೆ ಮಾಡಿತು. ಉಳಿದ ಪತ್ರಿಕೆಗಳಿಗೆ ಹೋಲಿಸಿದರೆ ಸಮೃದ್ಧ ಸುದ್ದಿ ವಿಜಯ ಕರ್ನಾಟಕದಲ್ಲಿ ರಾರಾಜಿಸಿತು. ಏಷ್ಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಪ್ರಾಧ್ಯಾಪಕರಾಗಿದ್ದ ವಿಶ್ವೇಶ್ವರ ಭಟ್ ಅವರು 2000 ಸಪ್ಟೆಂಬರ್‍ನಲ್ಲಿ ಕಾರ್ಯ ನಿರ್ವಾಹಕ ಸಂಪಾದಕರಾಗಿ ನೇಮಕಗೊಂಡ ನಂತರ ಪತ್ರಿಕೆಗೊಂದು ಆಯಾಮ ಬಂತು. ನಿರ್ದಿಷ್ಟ ಸ್ವರೂಪ ಸಿಕ್ಕಿತು. ಹಲವು ಸುಧಾರಣೆಗಳ ಜತೆಗೆ ವಿನೂತನ ಪ್ರಯೋಗಗಳಿಗೆ ಪತ್ರಿಕೆಯನ್ನು ತೆರೆದಿಡುತ್ತಾ ಹೋದರು. ದೇಶ-ವಿದೇಶಗಳ ನಾನಾ ಕ್ಷೇತ್ರದ ದಿಗ್ಗಜರ ವಿಶಿಷ್ಟ ಅಂಕಣಗಳು ಆರಂಬವಾದುವು. ಶಿಕ್ಷಣ, ವಿಜ್ಞಾನ-ತಂತ್ರಜ್ಞಾನ, ಸಂಸ್ಕøತಿ, ಧರ್ಮ, ಹಾಸ್ಯ, ರಾಜಕೀಯ, ಆರ್ಥಿಕ, ಕ್ರೀಡೆ, ಪ್ರಚಲಿತ, ವಿದ್ಯಾಮಾನಗಳ ಮೇಲೆ ಬೆಳಕು ಚೆಲ್ಲುವ ಅಂಕಣಗಳು ಜನಪ್ರಿಯ ಆದವು. ವಿಜಯ ಕರ್ನಾಟಕದಲ್ಲಿ ಪ್ರಕಟವಾಗುವಷ್ಟು ಅಂಕಣಗಳನ್ನು ಬೇರೆ ಭಾಷಾ ಪತ್ರಿಕೆಗಳಲ್ಲಿ ಕಾಣಲು ಸಾಧ್ಯವಿಲ್ಲ. ಒಂದು ವರ್ಗದ ಓದುಗರಿಗೆ ಮಾತ್ರ ಸೀಮಿತವಾಗಿದ್ದ ಸಂಪಾದಕೀಯ ಪುಟವನ್ನು ಎಲ್ಲರೂ ನೋಡುವಂತೆ ಮಾಡಿದ್ದು ಕೂಡ ವಿಜಯ ಕರ್ನಾಟಕದ ಸಾಧನೆ. ಆಕರ್ಷಕ ಪ್ರಾಸಬದ್ಧ ತಲೆ ಬರಹ, ಅಸಂಪ್ರದಾಯಿಕ ಶೈಲಿಯ ವರದಿಗಾರಿಕೆ, ವಿಶೇಷ-ತನಿಖಾ ವರದಿಗಳು, ಸುದ್ದಿ ವಿಶ್ಲೇಷಣೆ, ಜ್ವಲಂತ ಸಮಸ್ಯೆಗಳತ್ತ ಸರಕಾರದ ಕಣ್ಣು ತೆರೆಸುವ ಸರಣಿ ವರದಿ ಪ್ರಕಟವಾಗಲು ಆರಂಭವಾದವು. ಓದುಗರ ಬೌದ್ಧಿಕ ಮಟ್ಟ ಹೆಚ್ಚಿಸಲು ಪುಟಕ್ಕೊಂದು ಮಾಹಿತಿ ಶುರುವಾಯಿತು. ಇನ್ನಷ್ಟು ಪುರವಣಿಗಳು ಓದುಗರ ಹೃನ್ಮನ ಸೂರೆಗೈದವು. ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದವರು ಎಡವಿದಾಗ ಎಚ್ಚರಿಸುವ, ಮಾಡಿದ ತಪ್ಪುಗಳನ್ನು ಎತ್ತಿ ತೋರಿಸುವ, ಮಂತ್ರಿ-ಮಹೋದಯರ ಕಾರ್ಯವೈಖರಿಯನ್ನು ಓರೆಗೆ ಹಚ್ಚುವ ಕೆಲಸವನ್ನು ಪತ್ರಿಕೆ ಮಾಡುತ್ತಾ ಬಂದಿದೆ. ಸರಕಾರ ಸರಿದಾರಿಯಲ್ಲಿ ನಡೆಯದೇ ಹೊದಾಗ ಪ್ರತಿಪಕ್ಷದ ಜವಾಬ್ದಾರಿಯನ್ನೂ ಪತ್ರಿಕೆ ನಿರ್ವಹಿಸಿದೆ ಎಂದು ಜನರೇ ಮಾತಾಡಿಕೊಂಡಿರುವುದು ಉಂಟು.    

	ಪತ್ರಿಕೆ ಗುಣಮಟ್ಟದಲ್ಲಷ್ಟೇ ಅಲ್ಲದೆ ಸ್ವರೂಪದಲ್ಲೂ ಸುಧಾರಣೆ ಕಂಡುಕೊಂಡಿತು. ಪತ್ರಿಕೆಯನ್ನು ಆರಾಮವಾಗಿ ಕೈಯ್ಯಲ್ಲಿ  ಹಿಡಿದು ಅಕ್ಕಪಕ್ಕದವರೆಗೆ ಅಡಚಣೆ, ಮುಜುಗರ ಆಗದಂತೆ ಓದಲು ಅನುವಾಗುವಂತೆ ಅದರ ಆಕಾರವನ್ನು ಕುಗ್ಗಿಸಲಾಯಿತು. ಆದರೆ ಸುದ್ದಿ ಸಮೃದ್ಧಿಗೆ ಇದರಿಂದ ಯಾವುದೇ ಅಡ್ಡಿಯಾಗದಂತೆ ಎಚ್ಚರ ವಹಿಸಲಾಯಿತು. ಜತೆಗೆ ಪುಟವಿನ್ಯಾಸವನ್ನು ಮತ್ತಷ್ಟು ಸುಂದರಗೊಳಿಸಲಾಯಿತು. ಗುಣಮಟ್ಟ, ಆಕಾರ, ಸ್ವರೂಪ ಎಲ್ಲದರಲ್ಲೂ ಭಿನ್ನತೆ ಮತ್ತು ಇತರರಿಗೆ ಮಾದರಿ ಪತ್ರಿಕೆಯ ಹೆಗ್ಗಳಿಕೆ. ಇದೆಲ್ಲವುದರ ಪರಿಣಾಮವಾಗಿ ವಿಜಯ ಕರ್ನಾಟಕ ದಾಖಲೆ ಅವಧಿಯಲ್ಲಿ (ಮೂರೇ ವರ್ಷದಲ್ಲಿ) ಮಂಚೂಣಿಯಲ್ಲಿದೆ.

	ಜಿಲ್ಲೆಗೊಂದು ಆವೃತ್ತಿ ಆರಂಭಿಸಬೇಕೆಂಬುದು ಪತ್ರಿಕೆ ಮಾಲಿಕರ ಗುರಿ. 20005ರಲ್ಲಿ ಹಾಸನ ಆವೃತ್ತಿ ಆರಂಭವಾಗಿದೆ. ಇದರೊಂದಿಗೆ ಪತ್ರಿಕೆ ಒಟ್ಟು ಹತ್ತು ಆವೃತ್ತಿಗಳನ್ನು ಕಂಡಂತಾಗಿದೆ. ಕನ್ನಡದಲ್ಲಿ ಮೊದಲ ಬಾರಿ ಇ-ಪೇಪರ್ ಆರಂಭಿಸಿದ ಹೆಗ್ಗಳಿಕೆಯೂ ವಿಜಯ ಕರ್ನಾಟಕಕ್ಕೆ ಸೇರಿದೆ. ವಿಶ್ವದ ಯಾವುದೇ ಮೂಲೆಯಲ್ಲಿ ಕುಳಿತು ಕಂಪ್ಯೂಟರ್ ಪರದೆಯ ಮೇಲೆ ಪತ್ರಿಕೆಯ ಅಷ್ಟೂ ಪುಟಗಳನ್ನು ನೈಜ ಸ್ವರೂಪದಲ್ಲಿ ವಾಚಿಸಲು ಸಾಧ್ಯವಾಗಿದೆ. ವಿಜಯಾನಂದ ಪ್ರಿಂಟರ್ಸ್ ಸಂಸ್ಥೆಯ ವಿಜಯ ಟೈಮ್ಸ್ ಎಂಬ ಆಂಗ್ಲ ಪತ್ರಿಕೆಯ್ನನೂ ಆರಂಭಿಸಿತು. 2004ರಲ್ಲಿ ಆರಂಭವಾದ ವಿಜಯ್ ಟೈಮ್ಸ್ ಕೂಡ ವಿಜಯ ಕರ್ನಾಟಕದ ಹಾದಿಯಲ್ಲೇ ಮುನ್ನಡೆದಿದೆ. ಸುರೇಶ್ ಮೆನನ್ ಮೊದಲ ಸಂಪಾದಕರು. ನಂತರ ವಿಶ್ವೇಶ್ವರ ಭಟ್‍ರವರು ವಿಜಯ ಕರ್ನಾಟಕದ ಜತೆ-ಜತೆಯಲ್ಲೇ ವಿಜಯ ಟೈಮ್ಸ್ ಪತ್ರಿಕೆಗೂ ಸಂಪಾದಕರಾಗಿ ಕೆಲಕಾಲ ಇದ್ದರು. ತದನಂತರ ರಮಾನಂದ ಭಟ್ ಸಂಪಾದಕರಾಗಿ ಪತ್ರಿಕೆಯನ್ನು ಮುನ್ನಡೆಸುತ್ತಿದ್ದಾರೆ. ಎಲ್ಲ ಪುಟಗಳನ್ನು ವರ್ಣದಲ್ಲೇ ನೀಡಿದ ಮೊದಲ ಆಂಗ್ಲ ಪತ್ರಿಕೆ ಎಂಬ ಹೆಗ್ಗಳಿಕೆಯೂ ವಿಜಯ್ ಟೈಮ್ಸ್‍ನದು. ಅದರ ಇ-ಪೇಪರ್ ಕೂಡ ವಿಶ್ವದೆಲ್ಲೆಡೆ ಲಭ್ಯ.

	ಹೊಸತನ, ಹೊಸ ಪ್ರಯೋಗಗಳಿಗೆ ಹೆಸರಾದ ಸಂಸ್ಥೆಯು ಉಷಾಕಿರಣ ಎಂಬ ಮತ್ತೊಂದು ಕನ್ನಡ ಪತ್ರಿಕೆಯನ್ನು ಆರಂಭ ಮಾಡಿದೆ. ಒಂದೇ ಸಂಸ್ಥೆಯು ರಾಜ್ಯಮಟ್ಟದ ಒಂದೇ ಭಾಷೆಯ ಎರಡು ದೈನಿಕಗಳನ್ನು ಆರಂಭ ಮಾಡಿದ್ದು ಕೂಡ ಮೊದಲು. ಉಷಾಕಿರಣ ಪತ್ರಿಕೆಯೂ ಕೂಡ ಕನ್ನಡ ಪತ್ರಿಕಾರಂಗದಲ್ಲಿ ದಾಪುಗಾಲು ಹಾಕುತ್ತಿದೆ.               			
											(ಪಿ.ತ್ಯಾಗರಾಜ್)	(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ